ವಿಷವೃಕ್ಷ

>> Tuesday, May 4, 2010


ಚಿತ್ತಾಕರ್ಷಕ ಹೂ-ಎಲೆಗಳ
ಬಲಿತು ಕೊಬ್ಬಿದ ರೆಂಬೆ-ಕೊಂಬೆಗಳ
ಫಲಭರಿತ ಮಾವಿನ ಹಣ್ಣುಗಳ
ಬಲಿತ ಬಡ್ಡೆಯ ವೃಕ್ಷ
ಬೇಡ ಬೇಡವೆಂದರು ಸೆಳೆಯಿತಲ್ಲ ನನ್ನ ಕಣ್ಣು
ಪಾಪ! ಗೆಳೆಯ ಕಷ್ಟದಿ ನಿಟ್ಟುಸಿರನುಣಿಸಿ
ಕಣ್ಣೀರ ಕೋಡಿ ಹರಿಸಿ ಹಗಲು-ರಾತ್ರಿ
ಕಣ್ಣಲಿ-ಕಣ್ಣಿಟ್ಟು ಬೆಳೆಸಿಯೇ ಬಿಟ್ಟನಲ್ಲ
ತನ್ನ ಮನೆಯಂಗಳದಲಿ
ನಗುಮೊಗದ ಮಾವಿನ
ರುಚಿಯ ಗೆಳೆಯನಳೆಯದೆ
ತಪ್ಪಿಸಿಕೊಳ್ಳಲಿಲ್ಲ ಧೃತ ಆಲಿಂಗನದಿ
ಬಾನಂಗಳದ ಚುಕ್ಕೆಗಳ ಬೊಗಸೆಯಲಿ ಹಿಡಿದು
ಕಡಲನೇ ಮುಕ್ಕಳಿಸಿ ಕುಣಿಯುವ ನಾ
ಯಾರು ನನಗೆ ತಿಳಿಯಲೆ ಇಲ್ಲ.
ಮಾತುಗಳ ಸಿಂಚನದ ಸೆರಗ ಹಾಸಿ
ಅಡವಿಟ್ಟ ಮನದಾದರಗಳ ಚಾದರ ಹೊದ್ದು, ಬೇಸಿಗೆಯಲಿ
ತಣ್ಣಗೆ ಚಳಿಯಲಿ ಬೆಚ್ಚಗೆ ಮುದನೀಡುವ
ಗೆಳೆಯನ ಆರೈಕೆಯಲಿ ಆಳೆತ್ತರ ಬೆಳೆದ ಮರ
ನಿತ್ಯಾಕರ್ಷಕ-ಚಿತ್ತಾಕರ್ಷಕ ನನ್ನಂತೆ, ಒಮ್ಮೊಮ್ಮೆ
ಅವನಂತೆ
ಕುತೂಹಲ ವಿಶ್ವಾಸ ಅಗಮ್ಯ-ಅಗೋಚರ
ಸೆಳೆತ ನನ್ನನೆಳೆಯಿತು ವೃಕ್ಷದೆಡೆಗೆ
ಮೊದಲ ಪಾಪದ ಹಣ್ಣು
ತೆರೆಸಲಿಲ್ಲ ನನ್ನ ಒಳಗಣ್ಣು
ಮನದಾಳದ ಹಸಿವ ನೀಗಿಸಲು
ಇಳಿಸಿದೆ ಸಿಹಿ ಆಳದೊಳಗೆ
ಹುತ್ತ ಸೇರುವ ಹಾವಂತೆ ನುಸು-ನುಸುಳಿ
ಸಳ-ಸಳನೆ ಸರ-ಸರನೆ ಕಾಳ್ಗಿಚ್ಚಿನಂತೆ
ಇಳಿಯಿತು ಕರುಳಿನಾಳಕೆ
ಅಧರಕ್ಕೆ ಸಿಹಿ, ಉದರಕ್ಕೆ ಹೆಬ್ಬಾವು
ತಾಂಡವ ನೃತ್ಯ ಕತ್ತರಿಸಿತು ಕರುಳ ಬಳ್ಳಿಯನೆ
ಯತ್ನಿಸಿತು ಹೊರಬರಲು ನನ್ನ ತಿರುತಿರುಗಿ
ಒಗೆಯುತಲಿ
ಗಂಟಲಲಿ ಸಿಕ್ಕ ಉಸಿರು ಕೊಸರುತಲಿರುವಾಗ
ನೆನಪಾಯಿತು ಗೆಳೆಯನ ನಗು-ಮೊಗ
ನನ್ನನ್ನಿಲ್ಲಾಗಿಸಿದ, ಇಲ್ಲಾಗಿಸಿದ ಮಾವಿನ ಫಲ.

0 comments: